ದೇವೇಗೌಡ್ರು, ಖರ್ಗೆ, ಪವಾರ್‌ ಅವರ ಅನುಭವ ಕಿರಿಯರಿಗೆ ಪಾಠವಾಗಲಿ.. ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಶ್ಲಾಘನೆ | Narendra Modi

Narendra Modi | ಹಿರಿಯ ನಾಯಕರೊಂದಿಗೆ ಪ್ರಧಾನಿ ಮೋದಿ
Narendra Modi | ಹಿರಿಯ ನಾಯಕರೊಂದಿಗೆ ಪ್ರಧಾನಿ ಮೋದಿ
Published on
ನವದೆಹಲಿ: ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ 37 ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ವಿದಾಯ ತಿಳಿಸಿದ್ದು, ಸಂಸದೀಯ ಸಂಪ್ರದಾಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ ಹಿರಿಯ ಸದಸ್ಯರ ಪಾತ್ರ ಅನನ್ಯವಾದುದು ಎಂದು ಬಣ್ಣಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತನ್ನು ಮುಕ್ತ ವಿಶ್ವವಿದ್ಯಾಲಯ ಎಂದು ಕರೆದರು ಇಂದು ನಿವೃತ್ತರಾಗುತ್ತಿರುವ ಸದಸ್ಯರು ರಾಷ್ಟ್ರೀಯ ಜೀವನಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು. ಅನುಭವಿ ನಾಯಕರ ಸಾರ್ವಜನಿಕ ಸೇವೆಗೆ ಅಧಿಕಾರಾವಧಿಯ ಮಿತಿಯಿಲ್ಲ, ಸಂಸತ್ತಿನ ಮೇಲ್ಮನೆ ಒಂದು ನಿರಂತರ ಸಂಸ್ಥೆಯಾಗಿದ್ದು, ಇಲ್ಲಿನ ಅನುಭವ ಮತ್ತು ಬುದ್ಧಿವಂತಿಕೆ ದೇಶಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಇಂದು ನಿವೃತ್ತರಾಗುತ್ತಿರುವ ಸದಸ್ಯರು ಸದನವನ್ನು ಭೌತಿಕವಾಗಿ ತೊರೆಯುತ್ತಿರಬಹುದು, ಆದರೆ ಅವರ ಸಂಸದೀಯ ಅನುಭವವು ಸದಾ ನಮ್ಮೊಂದಿಗಿರುತ್ತದೆ, ರಾಜಕೀಯದಲ್ಲಿ ಯಾವತ್ತಿಗೂ ಪೂರ್ಣವಿರಾಮ ಇರುವುದಿಲ್ಲ, ಸಾರ್ವಜನಿಕ ಸೇವೆಯ ಪ್ರಯಾಣವು ಅಧಿಕಾರಾವಧಿಯನ್ನು ಮೀರಿದೆ ಎಂದರು.

ದೇವೇಗೌಡರು, ಖರ್ಗೆ, ಪವಾರ್ ಅವರಿಂದ ಕಲಿಯಿರಿ

ತಮ್ಮ ಭಾಷಣದುದ್ದಕ್ಕೂ ಹಿರಿಯ ನಾಯಕರಾದ ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರ ಹೆಸರನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅವರೆಲ್ಲಾ ಸಂಸದೀಯ ಸೇವೆಗೆ ನೀಡಿರುವ ಜೀವಮಾನದ ಕೊಡುಗೆಯನ್ನು ಸ್ಮರಿಸಿದರು.
ಈ ಎಲ್ಲಾ ಹಿರಿಯ ನಾಯಕರು ತಮ್ಮ ಜೀವನದ ಬಹುದೊಡ್ಡ ಭಾಗವನ್ನು ದೇಶದ ಸೇವೆಗೆ ಮುಡುಪಾಗಿಟ್ಟಿದ್ದಾರೆ, ಇಷ್ಟೊಂದು ದೀರ್ಘ ಅನುಭವವಿದ್ದರೂ, ಇಂದಿಗೂ ಅವರು ಸದನಕ್ಕೆ ತೋರುವ ಸಮರ್ಪಣಾಭಾವ ಶ್ಲಾಘನೀಯ, ಪ್ರತಿಯೊಬ್ಬ ಹೊಸ ಸಂಸದರೂ ಇವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಪ್ರಧಾನಿ ಹೇಳಿದರು.

ಉಪಸಭಾಪತಿ ಹರಿವಂಶ್ ಕಾರ್ಯವೈಖರಿಗೆ ಮೆಚ್ಚುಗೆ

ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಸದನವನ್ನು ನಡೆಸುವ ರೀತಿಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ಹರಿವಂಶ್ ಅವರು ಲೇಖನಿಯಲ್ಲಿ ನಿಪುಣರಾಗಿರುವಂತೆಯೇ, ಕಠಿಣ ಪರಿಶ್ರಮಿಯೂ ಆಗಿದ್ದಾರೆ. ಸದನದ ಕಲಾಪಗಳನ್ನು ಸಮತೋಲಿತವಾಗಿ ಮತ್ತು ಶಾಂತವಾಗಿ ನಿರ್ವಹಿಸುವ ಮೂಲಕ ಸಂಸತ್ತಿನ ಘನತೆಯನ್ನು ಎತ್ತಿಹಿಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸದನವು ಒಂದು ಕಾಲದಲ್ಲಿ ಉತ್ಸಾಹಭರಿತ ಹಾಸ್ಯ ಮತ್ತು ವಿಡಂಬನೆಗೆ ಹೆಸರುವಾಸಿಯಾಗಿತ್ತು, ಆದರೆ ಈಗ ಅಂತಹ ಕ್ಷಣಗಳು ಕಡಿಮೆಯಾಗುತ್ತಿವೆ ಎಂದಿರುವ ಪ್ರಧಾನಿ ಮೋದಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರನ್ನು ನಿತ್ಯಹರಿದ್ವರ್ಣ ಎಂದು ಬಣ್ಣಿಸಿದರು.
ಸದನದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಸಹಜ, ಆದರೆ ವಿದಾಯದಂತಹ ಕ್ಷಣಗಳಲ್ಲಿ ಪರಸ್ಪರ ಗೌರವದ ಭಾವನೆಯು ಪಕ್ಷಗಳ ರೇಖೆಗಳನ್ನು ಮೀರಿ ನಿಲ್ಲುತ್ತದೆ. ಕಿರಿಯ ಸದಸ್ಯರು ಹಿರಿಯರ ಹಾದಿಯನ್ನು ಅನುಸರಿಸಿ ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕರೆ ನೀಡುವ ಮೂಲಕ ಪ್ರಧಾನಿಯವರು ತಮ್ಮ ಭಾಷಣವನ್ನು ಮುಗಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net